ಮಾಧವಿ
ಯಯಾತಿ ರಾಜನ ಪುತ್ರಿ. ಪ್ರಸವಿಸಿದ ಕೂಡಲೆ ಕನ್ಯತ್ವ ಬರುವಂತೆ ಈಕೆ ವರ ಪಡೆದಿದ್ದಳು. ಗಾಲವ ವಿಶ್ವಾಮಿತ್ರನಿಗೆ ವರದಕ್ಷಿಣೆ ಕೊಡಲು ಯಯಾತಿಯಿಂದ ಮಾಧವಿಯನ್ನು ಪಡೆದುಕೊಂಡು ಇಕ್ಷ್ವಾಕು ವಂಶದ ಹರ್ಯಶ್ವ ರಾಜನಿಗೆ ಅವಳನ್ನು ಒಪ್ಪಿಸಿ 200 ಕುದುರೆಗಳನ್ನು ಪಡೆದ. ಮಾಧವಿ ಅವನಿಂದ ವಸುಮನ ಎಂಬ ಮಗನನ್ನು ಪಡೆದಳು. ಗಾಲವ ಮಾಧವಿಯನ್ನು ಕೇಶಿರಾಜ ದಿವೋದಾಸನಿಗೆ ಒಪ್ಪಿಸಿ 200 ಕುದುರೆಗಳನ್ನು ಪಡೆದ. ಆಕೆ ಆತನಿಂದ ಪ್ರತರ್ದನ ಎಂಬ ಮಗುವನ್ನು ಪಡೆದಳು. ಅನಂತರ ಗಾಲವ ಭೋಜನಗರಾಧೀಶ್ವರನಾದ ಉಶೀನರನಿಗೆ ಅವಳನ್ನು ಒಪ್ಪಿಸಿ ಆತನಿಂದ 200 ಕುದುರೆಗಳನ್ನು ಪಡೆದ. ಮಾಧವಿ ಆತನಿಂದ ಶಿಬಿ ಎಂಬ ಮಗನನ್ನು ಪಡೆದಳು. ಕೊನೆಗೆ ಗಾಲವ ಗುರುದಕ್ಷಿಣೆಯಾಗಿ ವಿಶ್ವಾಮಿತ್ರನಿಗೆ ಕುದುರೆಯ ಸಂಗಡ ಮಾಧವಿಯನ್ನು ಒಪ್ಪಿಸಿದ. ಮಾಧವಿ ವಿಶ್ವಾಮಿತ್ರನಿಂದ ಅಷ್ಟಕ ಎಂಬ ಪುತ್ರನನ್ನು ಪಡೆದಳು. ಇಷ್ಟಾಗಿಯೂ ಆಕೆಯ ಕನ್ಯಾತ್ವ ನಾಶವಾಗಲಿಲ್ಲ. ಆಗ ಯಯಾತಿ ನಾಲ್ಕು ಮಕ್ಕಳ ತಾಯಿಯಾಗಿದ್ದ ಮಾಧವಿಯನ್ನು ಕರೆತಂದು ಗಂಗಾ ಯಮುನಾ ಸಂಗಮದಲ್ಲಿ ಸ್ವಯಂವರವೇರ್ಪಡಿಸಿ ವಿವಾಹಕ್ಕೆ ಸಿದ್ಧಪಡಿಸಿದ. ಆದರೆ ಮಾಧವಿ ನೆರೆದಿದ್ದ ರಾಜಪುತ್ರರನ್ನೆಲ್ಲ ತಿರಸ್ಕರಿಸಿ ತಪಸ್ಸಿಗಾಗಿ ಅರಣ್ಯಕ್ಕೆ ಹೋದಳು. ಈ ವೃತ್ತಾಂತ ಭಾರತದಲ್ಲಿ ಬಂದಿದೆ.
	(ಬಿ.ಎನ್.ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ